ಫೋರ್ಟ್‍ವರ್ತ್ - 
ಟೆಕ್ಸಸ್ ರಾಜ್ಯದ ಉತ್ತರದಲ್ಲಿರುವ ಟಾರೆಂಟ್ ಕೌಂಟಿಯ ಆಡಳಿತ ಕೇಂದ್ರ ನಗರ. ಟ್ರಿನಿಟೀನದಿಯ ಉಪನದಿಗಳಾದ ಕ್ಲಿಯರ್ ಮತ್ತು ವೆಸ್ಟ್ ಪೋರ್ಕ್ ನದಿಗಳ ಸಂಗಮದ ಬಳಿ ಇರುವ ಈ ನಗರ ಡಲಾಸ್ ನಗರದ ಪಶ್ಚಿಮಕ್ಕೆ 48 ಕಿಮೀ ದೂರದಲ್ಲಿದೆ. ಇದನ್ನು ಕೇಂದ್ರ ನಗರ ಮತ್ತು ಅನೇಕ ಬಡಾವಣೆಗಳೊಡನೆ ವಿಸ್ತಾರಗೊಂಡಿರುವುದಕ್ಕೆ ಮಹಾನಗರವೆಂದೂ ಪರಿಗಣಿಸಿದ್ದಾರೆ. ಕೇಂದ್ರ ನಗರದ ವಿಸ್ತೀರ್ಣ 632 ಚಕಿಮೀ ಜನಸಂಖ್ಯೆ 3,85,141 (1980). ಮಹಾನಗರದ ವಿಸ್ತೀರ್ಣ 22,188 ಚಕಿಮೀ (1975) ಜನಸಂಖ್ಯೆ 29,74,878 (1980). 

	ಮೇಜರ್ ರಿಪ್ಲೆ ಎ. ಆರ್ನಾಲ್ಡ್ 1849ರಲ್ಲಿ ಅಲ್ಲಿಯ ನೆಲೆಸಿಗರ ರಕ್ಷಣೆಗಾಗಿ ಒಂದು ಸೈನಿಕ ಠಾಣೆಯನ್ನು ಸ್ಥಾಪಿಸಿದ. ಮುಂದೆ ಅಲ್ಲಿಂದ ಸೈನ್ಯ ವಾಪಾಸಾದಾಗ ಅಲ್ಲಿಯ ಸೈನಿಕ ಠಾಣೆಯ ಕಟ್ಟಡಗಳಲ್ಲಿ ಜನರು ಸೇರಿಕೊಂಡು ವಾಸಿಸತೊಡಗಿದರು. ಮೆಕ್ಸಕನ್ ಯುದ್ಧದ ವೀರ ಮೇಜರ್ ಜನರಲ್ ವಿಲಿಯಮ್ ಜೆ. ವರ್ತ್ ಆತನ ಹೆಸರಿನಿಂದ ಈ ನಗರಕ್ಕೆ ಫೋರ್ಟ್‍ವರ್ತ್ ಎಂಬ ಹೆಸರು ಬಂತು. ದನಗಳ ದೊಡ್ಡವ್ಯಾಪಾರ ಕೇಂದ್ರವಾಗಿದ್ದು ಈ ನಗರವನ್ನು ಕೌಟಾನ್ ಎಂದು ಈಗಲೂ ಜನ ಗುರುತಿಸುವುದುಂಟು. 1860ರಲ್ಲಿ ಟಾರೆಂಟ್ ಕೌಂಟಿಯ ಆಡಳಿತ ಕೇಂದ್ರವಾಯಿತು. ಇದನ್ನು 1873ರಲ್ಲಿ ಒಂದು ಪಟ್ಟಣವಾಗಿ ಪರಿಗಣಿಸಲಾಯಿತು. 1876ರಲ್ಲಿ ಟೆಕ್ಸಸ್ ಮತ್ತು ಪೆಸಿಫಿಕ್ ರೈಲು ಮಾರ್ಗದ ಸಂಪರ್ಕ ನಗರಕ್ಕಾಗಿ ಅದರ ವ್ಯಾಪಾರದ ಅಭಿವೃದ್ಧಿಗೆ ಹೊಸ ಮಾರ್ಗವಾಯಿತು. ಸುಮಾರು 1915ರಲ್ಲಿ ಪಶ್ಚಿಮ ಟೆಕ್ಸಸಿನಲ್ಲಿ ಅನೇಕ ತೈಲ ನಿಕ್ಷೇಪಗಳನ್ನು ಪತ್ತೆಹಚ್ಚಲಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ (1939-1945) ಫೋರ್ಟ್‍ವರ್ತ್‍ನಲ್ಲಿ ವಿಮಾನ, ಹೆಲಿಕಾಪ್ಟರ್ ಮತ್ತು ಇತರ ಸೈನಿಕ ಉಪಯುಕ್ತ ವಸ್ತುಗಳ ತಯಾರಿಕೆಯ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ಫೋರ್ಟ್‍ವರ್ತ್‍ನ ಜನಸಂಖ್ಯೆ ವೃದ್ಧಿಸಲು ಇವು ಮುಖ್ಯವಾದವು. 

	ಫೋರ್ಟ್‍ವರ್ತ್ ನಗರ ವಾಸಿಗಳಲ್ಲಿ ಸುಮಾರು ಅರ್ಧ ಮಂದಿ ಇಲ್ಲಿರುವ ಸುಮಾರು 780 (1975) ವಿವಿಧ ಕಾರ್ಖಾನೆಗಳಲ್ಲಿ ದುಡಿಯುತ್ತಾರೆ. ಇಲ್ಲಿಯ ವಿಮಾನ ಕಾರ್ಖಾನೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೆ ದೊಡ್ಡದಾದದ್ದು. ಎಣ್ಣೆ ಬಾವಿಗಳ ಯಂತ್ರೋಪಕರಣಗಳು, ಆಹಾರ ಸಾಮಗ್ರಿಗಳು, ವಿವಿಧ ಮದ್ಯ ತಯಾರಿಕೆ, ವಿದ್ಯುತ್ ಉಪಕರಣಗಳು ಮತ್ತು ಸ್ವಯಂಚಾಲಿತ ಯಂತ್ರಗಳು, ಪೀಠೋಪಕರಣಗಳು ಮತ್ತು ಚರ್ಮ ವಸ್ತುಗಳ ಪ್ರಮುಖ ತಯಾರಿಕಾ ಕೇಂದ್ರವಾಗಿದೆ. ನಗರಕ್ಕೆ ಈಶಾನ್ಯದಲ್ಲಿ ಸುಮಾರು 26 ಕಿಮೀ ದೂರದಲ್ಲಿ ಈ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ವಿವಿಧ ಶಾಲಾ ಕಾಲೇಜುಗಳೂ ವಸ್ತು ಸಂಗ್ರಹಾಲಯಗಳೂ ಅತ್ಯಾಧುನಿಕ ಕಟ್ಟಡಗಳೂ ಇದ್ದು ನಗರ ಸಂಯುಕ್ತ ಸಂಸ್ಥಾನದ ಒಂದು ಆಧುನಿಕವಾದಭಾರಿ ಉದ್ಯಮ ಮತ್ತು ವ್ಯಾಪಾರ ಕೇಂದ್ರವಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ